ಆವೃತಬೀಜ ಸಸ್ಯಗಳು
	ಕೋಶಾವೃತ ಬೀಜಗಳಿರುವ ಸಸ್ಯಗಳು (ಆಂಜಿಯೋಸ್ಪಮ್ರ್ಸ್): ಕೋಶರಹಿತ ಬೀಜಗಳಿರುವುವು ನಗ್ನಬೀಜ ಸಸ್ಯಗಳು (ನೋಡಿ- ನಗ್ನಬೀಜ-ಸಸ್ಯಗಳು). ಇವೆರಡೂ ವರ್ಗಗಳ ಒಟ್ಟು ಹೆಸರು ಬೀಜೋತ್ಪನ್ನ ಸಸ್ಯಗಳು (ಸ್ಪರ್ಮಫೈಟ್). ಇವು ಉಚ್ಚವರ್ಗದ ಸಸ್ಯಗಳು. ಸಸ್ಯಸಮೂಹದಲ್ಲಿ ಆವೃತಬೀಜಸಸ್ಯಗಳೇ ಅತ್ಯಧಿಕ ಸಂಖ್ಯೆಯವು. ಇವುಗಳ ಸಂಖ್ಯೆ 350 ಕುಟುಂಬಗಳಲ್ಲಿ ವ್ಯಾಪಿಸಿರುವ 2,50,000 ಪ್ರಭೇದಗಳು ಅಥವಾ ಉಚ್ಚ ವರ್ಗದ ಸಸ್ಯಗಳ 5/7ರಷ್ಟು ಇರಬಹುದೆಂದು ಅಂದಾಜು ಮಾಡಿದ್ದಾರೆ. ಇನ್ನೂ ಅನೇಕ ಹೊಸ ಪ್ರಭೇದಗಳು ನೈಸರ್ಗಿಕವಾಗಿಯೂ ಕೃತಕವಾಗಿಯೂ ಉತ್ಪನ್ನವಾಗುತ್ತಿವೆ. ಆವೃತಬೀಜ ಸಸ್ಯಗಳ ಬೀಜಗಳು ಹಣ್ಣಿನ ಒಳಗೆ ಮುಚ್ಚಿರುತ್ತದೆ. ಸಸ್ಯಗಳಲ್ಲಿ ಇವು ಮಾತ್ರ ಹೂ ಬಿಡುವುವು. ಬಾಹ್ಯರಚನೆ ಮತ್ತು ಬೀಜೋತ್ಪನ್ನ ವಿಧಾನಗಳಲ್ಲಿ ಆವೃತಬೀಜ ಸಸ್ಯಗಳಿಗೂ ನಗ್ನಬೀಜಸಸ್ಯಗಳಿಗೂ ಬಹಳ ವ್ಯತ್ಯಾಸವುಂಟು. ಆಂಜಿಯೋಸ್ಪರ್ಮ ಎಂಬ ಗ್ರೀಕ್ ಪದದ ಅರ್ಥ ಹೀಗಿದೆ; ಆಂಜಿಯಾನ್ ಅಂದರೆ ಕೋಶ, ಸ್ಪರ್ಮ ಅಂದರೆ ಬೀಜ. ಈ ಪದವನ್ನು ಪ್ರಥಮವಾಗಿ ಪಾಲ್‍ಹರ್‍ಮಾನ್ ಸಸ್ಯಗಳ ವರ್ಗೀಕರಣದಲ್ಲಿ ಬಳಸಿದ (1690). ಆತನೇ ನಗ್ನಬೀಜ ಸಸ್ಯಗಳನ್ನು ಮೊದಲ ಬಾರಿಗೆ ಗುರುತಿಸಿ ಅವನ್ನು ಆವೃತಬೀಜಸಸ್ಯಗಳಿಂದ ಬೇರ್ಪಡಿಸಿ ವಿವರಿಸಿದ. ಆ ಹೆಸರುಗಳೇ ಇಂದಿಗೂ ಉಳಿದುಕೊಂಡಿವೆ. 

	ಭೂಭಾಗದ ಅತ್ಯಧಿಕ ಸ್ಥಳವನ್ನು ಆವೃತಬೀಜ ಸಸ್ಯಸಮೂಹ ಆವರಿಸಿದೆ. ಪ್ರಾಣಿಜೀವನಕ್ಕೆ ಇವು ಮುಖ್ಯ ಆಧಾರ ಸಸ್ಯಗಳು. ಮಾನವಕುಲಕ್ಕೆ ಅಗತ್ಯವಾದ ಸಸ್ಯಾಹಾರ, ಬಟ್ಟೆ ಮತ್ತು ಆಸರೆ ಈ ಪಂಗಡದಿಂದಲೇ ಹೆಚ್ಚಾಗಿ ಒದಗುವುದು. ಪ್ರಪಂಚದ ಜೀವರಾಶಿಗಳ ಉಳಿವಿಗೆ ಅಗತ್ಯವಾದ ಆಕ್ಸಿಜನ್ ಉತ್ಪಾದನೆಗೂ ಜಲಾನಯನ ಭೂಮಿಗಳ ರಕ್ಷಣೆಗೂ ಇದೇ ಮೂಲ. ಇವುಗಳಿಲ್ಲದಿದ್ದಲ್ಲಿ ಬಹುಶಃ ಎಲ್ಲೆಲ್ಲೂ ಮರಳುಭೂಮಿ ಹರಡಿ ಗಾಳಿಯಲ್ಲಿ ಹೆಚ್ಚಾಗಿ ಆಕ್ಸಿಜನ್ ಇಲ್ಲದೆ ಪ್ರಾಣಿ ಜೀವನ ಸಾಧ್ಯವಿಲ್ಲವಾಗುತ್ತಿತ್ತು. ಬತ್ತ, ಗೋಧಿ, ಬಾರ್ಲಿ, ಜೋಳ, ಮುಸುಕಿನ ಜೋಳ, ದ್ವಿದಳ ಧಾನ್ಯಗಳು, ನೆಲಗಡಲೆ ಮುಂತಾದ ಎಲ್ಲ ಆಹಾರ ಧಾನ್ಯಗಳೂ ವಿವಿಧ ತರಕಾರಿ ಮತ್ತು ಅನೇಕ ಹಣ್ಣುಗಳೂ ಈ ಸಸ್ಯಗಳಿಂದ ಒದಗುತ್ತವೆ. ಬಟ್ಟೆಗೆ ಮತ್ತು ಹುರಿ ತಯಾರಿಕೆಗೆ ಅಗತ್ಯವಾದ ನಾರು, ಹತ್ತಿ, ಅಗಸೆ, ಗೋಣಿ, ಕತ್ತಾಳೆ ಇತ್ಯಾದಿಗಳೂ ವಿವಿಧ ಔಷಧಿಗಳೂ, ಟೀ, ಕಾಫಿ, ಕೋಕೋ ಮೊದಲಾದ ಪಾನೀಯಗಳೂ, ಹೊಗೆಸೊಪ್ಪು, ರಬ್ಬರ್, ಕಾಗದ, ಸಕ್ಕರೆ, ಬಣ್ಣ ಮುಂತಾದ ವಾಣಿಜ್ಯ ವಸ್ತುಗಳೂ ಇವುಗಳಿಂದಲೇ ನಮಗೆ ಒದಗುವುವು. 

	ಆವೃತಬೀಜ ಸಸ್ಯಗಳ ಆಕಾರ ಮತ್ತು ಜೀವನರೀತಿಯಲ್ಲಿ ಹೆಚ್ಚು ವೈವಿಧ್ಯವುಂಟು; ವಿವಿಧ ಪರಿಸ್ಥಿತಿಗೆ ಹೊಂದಿಕೊಳ್ಳುವ ಯತ್ನವೂ ಸಸ್ಯಾಭಿವೃದ್ಧಿಗೆ ಅನುಕೂಲವಾಗುವಂತೆ ಹೂ, ಹಣ್ಣು ಮತ್ತು ಬೀಜಗಳ ರಚನೆಯಲ್ಲಿ ಮಾರ್ಪಾಟಾಗಿರುವುದೂ ಇದಕ್ಕೆ ಮುಖ್ಯ ಕಾರಣ. ಗಾಳಿ ನೀರು ಮತ್ತು ಪ್ರಾಣಿಗಳಿಂದ ಬೀಜಪ್ರಸಾರ ಮಾಡುತ್ತ ಇವು ಎಲ್ಲ ಕಡೆಗೂ ಹರಡಿಕೊಂಡಿವೆ. ಸಿಹಿನೀರಿನ ಸರೋವರ ಮತ್ತು ನದಿಗಳಲ್ಲೂ ಹಲವು ಕುಟುಂಬಗಳು ಬೆಳೆಯುತ್ತವೆ. ಉದಾಹರಣೆಗೆ, ನಾಯಡೇಸಿ ಮತ್ತು ಪೊಟಾಮೋಗೆ ಟೋನೇಸಿ ಕುಟುಂಬದ ಜಾತಿಗಳನ್ನು ಗಮನಿಸಬಹುದು. ಉಲ್ಫಿಯಾ ಮತ್ತು ಲಮ್ನ ಗಿಡಗಳು ಸಣ್ಣ ತೇಲುವ ತಟ್ಟೆಯಾಕಾರ ಹೊಂದಿದ್ದು ಅವುಗಳಲ್ಲಿ ಹಲವು 1/16” ಅಗಲ ಮಾತ್ರ ಇವೆ. ಇದಕ್ಕೆ ವ್ಯತಿರಿಕ್ತವಾಗಿ ಯೂಕಲಿಪ್ಟಸ್ (ನೀಲಗಿರಿ) ಮತ್ತು ಗೋರಿಯಾ ಮುಂತಾದ ಮರಗಳು 300 ಎತ್ತರ ಬೆಳೆಯಬಹುದು. ಕೆಲವು ಜಾತಿಗಳು ಅಲ್ಪಾಯುವಾದಲ್ಲಿ ಇನ್ನೂ ಕೆಲವು ಹಲವು ಶತಮಾನಕಾಲ ಬದುಕಬಲ್ಲ ದೀರ್ಘಾಯು ಜಾತಿಗಳು. ಜಾಸ್ಟೇರಾ ಆಳವಲ್ಲದ ಸಮುದ್ರತೀರದ ಉಪ್ಪು ನೀರಿನಲ್ಲಿ ಬೆಳೆಯುತ್ತದೆ. ದಟ್ಟಡವಿಗಳೂ ಗೊಂಡಾರಣ್ಯಗಳೂ ಇವುಗಳಿಂದಲೇ ಉಂಟಾಗುತ್ತವೆ. ಅಲ್ಲಿ ಹೆಚ್ಚು ಮಳೆಯಿಂದಾಗಿ ಅವು ಸೊಂಪಾಗಿ ಬೆಳೆಯುತ್ತವೆ. ಹಿಮಾವೃತ ಬೆಟ್ಟದ ತುದಿಗಳಲ್ಲೂ ಧ್ರುವಪ್ರದೇಶಗಳಲ್ಲೂ ಬೆಳೆಯುವ ಹಲವು ವರ್ಣರಂಜಿತ ಹೂಗಿಡಗಳು ಈ ಪಂಗಡದವೇ. ಹಾಗೂ ಹಲವು ವರ್ಷಗಳಿಗೊಮ್ಮೆ 1” ಕ್ಕಿಂತ ಕಡಿಮೆ ಮಳೆಯಾಗುವ ಮರಳುಕಾಡಿನಲ್ಲೂ ಅನೇಕ ಜಾತಿಯ ಪ್ರಭೇದಗಳು ಬೆಳೆಯುತ್ತವೆ. ಇವುಗಳಿಗೆ ಕಳ್ಳಿಗಳೂ ಮತ್ತು ಐಜೋಏಸಿ ಕುಟುಂಬದ ಸಸ್ಯಗಳೂ ಉತ್ತಮ ಉದಾಹರಣೆಗಳು. 

	ಇವೆಲ್ಲ ಬಹುತೇಕ ಸ್ವಾವಲಂಬಿ ಸಸ್ಯಗಳು. ಆದರೆ ಹಲವು ಅಪ್ಪುಗಿಡಗಳು ಅಥವಾ ಪರಾವಲಂಬಿಗಳಾಗಿ ಪರಿವರ್ತನೆ ಹೊಂದಿವೆ. ಅಪ್ಪುಗಿಡಗಳು ನೀರು, ಆಹಾರ ಹೀರಲು ಅನುಕೂಲವಾಗುವಂಥ ಬೇರನ್ನೂ ಆಹಾರ ಉತ್ಪನ್ನಮಾಡಲು ಬೇಕಾದ ಹರಿತ್ತನ್ನೂ ಸಾಕಷ್ಟು ಹೊಂದಿರುತ್ತವೆ.  ಭೂಮಿ ಅಥವಾ ನೀರಿನಲ್ಲಿ ಸ್ವಾವಲಂಬಿಯಾಗಿ ಬೆಳೆಯದೆ ಬೇರೆ ಮರಗಳ ಆಶ್ರಯ ಪಡೆದು ಅವುಗಳ ಕಾಂಡ ಅಥವಾ ಕೊಂಬೆಗಳ ಮೇಲೆ ಬೆಳೆಯುತ್ತವೆ. ಆಶ್ರಯ ಯಾಚಿಸುತ್ತವೆಯೇ ಹೊರತು ಆ ಮರಗಳಿಗೆ ಹಾನಿಮಾಡುವುದಿಲ್ಲ. ವಿವಿಧ ಆರ್ಕಿಡ್ ಮತ್ತು ಜರಿಸಸಿಗಳು ಇದಕ್ಕೆ ಉದಾಹರಣೆ. ಆದರೆ ವಿಸ್ಕಂ ಕಸ್‍ಕ್ರೊಟ ಮುಂತಾದುವುಗಳಲ್ಲಿ ಹರಿತ್ತು ಇರುವುದಿಲ್ಲ. ಆಶ್ರಯ ಜೀವಿಗಳ ಅಂಗಾಂಶದೊಳಕ್ಕೆ ತಮ್ಮ ಬೇರನ್ನು ಬಿಟ್ಟು ಅದರ ಆಹಾರ ಹೀರುತ್ತವೆ. ಪೋಷಕಸಸ್ಯಗಳಿಗೆ ಮಾರಕವೆನಿಸಿರುವ ಇವು ಪರಾವಲಂಬಿ ಉಪಜೀವಿಗಳು. 

	ಹಲವು ಪೂತಿಜನ್ಯಸಸ್ಯಗಳು ಕೊಳೆತ ಪದಾರ್ಥಗಳಿಂದ ಆಹಾರ ಪಡೆದು ಬೆಳೆಯುತ್ತವೆ. ಆದರೆ ಎಲ್ಲಕ್ಕಿಂತಲೂ ಆಶ್ಚರ್ಯಕರ ವೈವಿಧ್ಯ ಕೀಟಾಹಾರಿಗಳಲ್ಲಿ ಕಂಡುಬಂದಿದೆ. ಕೀಟಗಳನ್ನು ಹಿಡಿದು ಜೀರ್ಣಿಸಿಕೊಳ್ಳುವಂಥ ಸಾಮಥ್ರ್ಯ ಇವುಗಳ ಎಲೆಗಳು ಹೊಂದಿವೆ. ಇವು ವಿವಿಧ ಗಾತ್ರದವುಗಳಾಗಿ, ನೇರವಾಗಿ ಬೆಳೆಯಬಲ್ಲ ಮರವಾಗಿ, ಸುತ್ತಿ ಬೆಳೆಯುವ ಬಳ್ಳಿಯಾಗಿ ಅಥವಾ ಹರಡುವ ಪೊದರುಗಳಾಗಿ ಎಲ್ಲ ಭೂಭಾಗಕ್ಕೂ ಹೊಂದಿಕೊಂಡು ಆವರಿಸಿರುವುದರಿಂದಲೇ ಈ ಪಂಗಡಕ್ಕೆ ಹೆಚ್ಚಿನ ಪ್ರಾತಿನಿಧ್ಯವಿರುವುದು.  

	ಪ್ರಾಚೀನತೆ : ಪಳೆಯುಳಿಕೆಗಳ ಆಧಾರ ಪರಿಪೂರ್ಣವಾಗಿ ದೊರೆತಿಲ್ಲ. ಇವು ನಗ್ನಬೀಜಗಳು ಮತ್ತು ಜರಿಗಿಡಗಳಷ್ಟು ಪುರಾತನ ಅಲ್ಲವೆಂಬುದು ಮಾತ್ರ ಸ್ಪಷ್ಟ. ಜೊರಾಸಿಕ್ ಕಲ್ಪದ ಹಲವು ಪಳೆಯುಳಿಕೆಗಳು ದೊರೆತಿವೆ. ನಗ್ನಬೀಜ ಸಸ್ಯಗಳ ಮತ್ತು ಜರಿಗಿಡಗಳ ಪಳೆಯುಳಿಕೆಗಳ ಮತ್ತು ಜೀವಂತಸಸ್ಯಗಳ ಅಂಗರಚನೆ ಮತ್ತು ಬಾಹ್ಯರಚನೆಗಳ ಹೋಲಿಕೆಯಿಂದ ಆವೃತಬೀಜ ಸಸ್ಯಗಳು ಈಗಿರುವ ನಗ್ನಬೀಜ ಸಸ್ಯಗಳಿಂದಾಗಲೀ ಜರಿಗಿಡಗಳಿಂದಾಗಲೀ ಉತ್ಪನ್ನವಾಗಿಲ್ಲವೆಂದು ಖಚಿತವಾಗಿದೆ. ಇವು ಪ್ರಾಚೀನಯುಗದಲ್ಲಿ ವೃದ್ಧಿಯಾಗಿದ್ದ ಮತ್ತು ಬೀಜಹೊಂದಿದ್ದ ಜರಿಗಿಡಗಳಿಂದ ಉತ್ಪನ್ನವಾಗಿ ಮುಂದಿನ ದಿವಸಗಳಲ್ಲಿ ಹಠಾತ್ತಾಗಿ ಹರಡಿ ಪ್ರಾಮುಖ್ಯಗಳಿಸಿರಬೇಕೆಂದು ತೋರುತ್ತದೆ. 

	ರಚನೆ : ಆವೃತಸಸ್ಯಗಳಲ್ಲಿ ತಾಯಿಬೇರು ಮತ್ತು ತೊಡಕು ಬೇರುಗಳೆರಡೂ ಚೆನ್ನಾಗಿ ವೃದ್ಧಿಯಾಗಿರುತ್ತವೆ. ಆದರೆ ನಗ್ನಬೀಜಸಸ್ಯಗಳಿಗಿಂತ ಇವುಗಳಲ್ಲಿ ತೊಡಕು ಬೇರುಗಳು ಹೆಚ್ಚು. ಕಾಂಡದಲ್ಲಿ ಹೆಚ್ಚು ಕೊಂಬೆಗಳಿವೆ. ಇವುಗಳಿಗೆ ಬಹು ಎಲೆಗಳಿಂದ ಕೂಡಿದ ಕವಲುಗಳಿವೆ. ಕಾಂಡದ ಒಳಗೆ ನಾಳ ಸಮೂಹದಲ್ಲಿ ನೀರು ಕೊಳವೆಗಳೂ ದೃಢತೆಗಾಗಿ ನಾರುಗಳೂ ಇವೆ. ಹಲವು ನಿಮ್ನ ಕುಟುಂಬಗಳಲ್ಲಿ ಇದು ಸ್ಪಷ್ಟವಾಗಿ ಕಾಣದಿದ್ದರೂ (ಉದಾಹರಣೆಗೆ, ವಿಂಟರೇಸಿ) ಸಾಮಾನ್ಯವಾಗಿ ಎಲ್ಲ ಸಸ್ಯಗಳಲ್ಲೂ ಚೆನ್ನಾಗಿ ಬೆಳೆದಿರುತ್ತದೆ. ಅವುಗಳ ಸುತ್ತಲೂ ಮೃದುಅಂಗಾಂಶ ಇರುವುದು ಈ ಪಂಗಡದ ಒಂದು ಮುಖ್ಯಾಂಶ. ಎಲೆಗಳು ಅಗಲವಾಗಿದ್ದು, ವಿವಿಧ ಆಕಾರಗಳಿಂದ ಕೂಡಿವೆ. ಅವು ಸಾಮಾನ್ಯಪತ್ರ ಅಥವಾ ಭಿನ್ನಪತ್ರಗಳಾಗಿರಬಹುದು. ಸೂರ್ಯರಶ್ಮಿ ಹೆಚ್ಚಾಗಿ ಬೀಳುವಂತೆ ಈ ಎಲೆಗಳು ರೆಂಬೆಯಲ್ಲಿ ಒಂದು ನಿಯತ ರೀತಿಯಲ್ಲಿ ಸಂಯೋಜನೆಗೊಂಡಿವೆ. ಅವು ಬಲೆಯಾಕಾರ ಅಥವಾ ಸಮಾನಾಂತರ ನಾಳಜಾಲವನ್ನು ಹೊಂದಿವೆ. 

	ಜನನಾಂಗಗಳು : ಪುಷ್ಪಗಳು ಆವೃತಬೀಜ ಸಸ್ಯಗಳಲ್ಲಿ ವಂಶಾಭಿವೃದ್ಧಿಯ ಮುಖ್ಯಾಂಗ. ಅವು ಮಾರ್ಪಾಟಾದ ಸಣ್ಣ ರೆಂಬೆ. ರೆಂಬೆ ಗಿಡ್ಡವಾಗಿ ಅದರ ಎಲೆಗಳು ವಿವಿಧ ಆಕಾರ ಮತ್ತು ವರ್ಣಗಳನ್ನು ಹೊಂದಿ ರೆಂಬೆಯ ತುದಿಯಲ್ಲಿ ಜೋಡಿಸಿಕೊಂಡು ಹೂ ಆಗುತ್ತದೆ. ಹೂವಿನ ತೊಟ್ಟಿನಮೇಲೆ ಸಾಮಾನ್ಯವಾಗಿ ಹಸುರುಬಣ್ಣವಿರುವ ಪುಷ್ಪಪತ್ರದ ಹೊರಮಂಡಲ ಇದೆ. ಅದರೊಳಗೆ ವಿವಿಧ ಬಣ್ಣಗಳ ದಳಗಳೂ ಜೋಡಿಸಿಕೊಂಡಿವೆ. ಮಧ್ಯಭಾಗದ ಕೇಸರ ಮತ್ತು ಅಂಡಕೋಶಗಳನ್ನು ಚಳಿ, ಮಳೆ, ಗಾಳಿ, ಕ್ರಿಮಿಕೀಟಗಳಿಂದ ದಳಗಳೂ ಪುಷ್ಪಪತ್ರಗಳೂ ರಕ್ಷಿಸುತ್ತವೆ. ದಳಗಳು ಬಿಡಿಬಿಡಿಯಾಗಿರಬಹುದು ಅಥವಾ ಸಂಯುಕ್ತವಾಗಿರಬಹುದು; ಸಮ ಅಥವಾ ಅಸಮ ದಳಗಳಾಗಿರಬಹುದು. ಸಮದಳಪುಷ್ಪಗಳಲ್ಲಿ ಕೇಂದ್ರ ಸೌಷ್ಠವರಚನೆ ಅಥವಾ ಸೌಷ್ಠವರಹಿತ ಸ್ಥಿತಿ ಇರಬಹುದು. ದಳಗಳ ಜೋಡಣೆಗೆ ಅನುಗುಣವಾಗಿ ಈ ವಿಂಗಡಣೆ ಸಾಧ್ಯ. ದಳಗಳು ವರ್ಣಮಯವಾಗಿಯೂ ಸುವಾಸನಾಯುಕ್ತವಾಗಿಯೂ ಇವೆ. ವಂಶಾಭಿವೃದ್ಧಿಗೆ ಸಹಾಯವಾಗುವ ಕೀಟಗಳ ಆಕರ್ಷಣೆಗೆ ಇವು ಸಹಾಯಕಗಳು. 

	ಕೇಸರಗಳ ಸಂಖ್ಯೆ ದಳಗಳಷ್ಟೇ ಇರಬಹುದು ಅಥವಾ ಇಮ್ಮಡಿ ಅಥವಾ ಅಸಂಖ್ಯಾತವಾಗಿ ಇರಬಹುದು.  ಕೆಲವು ಜಾತಿಗಳಲ್ಲಿ ಕಡಿಮೆಯಾಗಿರುವುದೂ ಉಂಟು. ಕೇಸರದಲ್ಲಿ ಎರಡು ಮುಖ್ಯ ಭಾಗಗಳಿವೆ. ಕೇಸರದಂಡ ಪುಷ್ಪಪೀಠದಿಂದ ಸಣ್ಣ ಎಳೆಯಂತೆ ಬೆಳೆಯುತ್ತದೆ; ಅದರ ತುದಿಯಲ್ಲಿ ಪ್ರಜನನ ಜೀವಕಣಗಳ ಉತ್ಪತ್ತಿ ಭಾಗವಿದ್ದು ಅವುಗಳ ವಿಭಜನೆಯಿಂದ ಪರಾಗ ಉತ್ಪನ್ನವಾಗಿ ಈ ಕೋಶದಲ್ಲಿ ತುಂಬಿ ಪ್ರಸಾರಕ್ಕೆ ಸಿದ್ಧವಾಗುತ್ತವೆ. ಕೋಶದ ಹೊರಭಿತ್ತಿ ಉದ್ದಕ್ಕೂ ಸೀಳಿ ಪರಾಗ ಹೊರಬೀಳುತ್ತದೆ. ಪರಾಗ ಸಸ್ಯದ ಗಂಡುಜನನಕಣ; ಕೇಸರ ಮಂಡಲ ಬಿಡಿಯಾಗಿ ಅಥವಾ ಸಂಯುಕ್ತವಾಗಿರಬಹುದು. ಸಂಯುಕ್ತವಾಗಿದ್ದಲ್ಲಿ ಅಂಡಾಶಯದ ಶಲಾಕೆಯನ್ನು ಸುತ್ತುಗಟ್ಟಿರುತ್ತದೆ. ಅಂಡಕೋಶ ಹೂವಿನ ಮಧ್ಯ ಭಾಗದಲ್ಲಿದೆ. ಇದೇ ಹೂವಿನ ಹೆಣ್ಣು ಜನನಾಂಗ. ಅದರ ತಳಭಾಗ ಅಂಡಗಳನ್ನು ಹೊಂದಿರುವ ಅಂಡಾಶಯ; ಅದರ ಮೇಲೆ ಶಲಾಕೆಯೂ ಅದರ ತುದಿಯಲ್ಲಿ ಶಲಾಕಾಗ್ರವೂ ಇವೆ. ಅಂಡಕೋಶ ಒಂದೇ ಆಗಿರಬಹುದು ಅಥವಾ ವಿಭಾಗವಾಗಿರಬಹುದು. ಇದು ಬೀಜೋತ್ಪನ್ನ ಕಾರ್ಯಕ್ಕಾಗಿ ಪರಿವರ್ತನೆ ಹೊಂದಿದ ಎಲೆ. ಬಹುಶಃ ಪೂರ್ವದ ಸಸ್ಯಗಳಲ್ಲಿ ಹಲವು ತುದಿಯ ಎಲೆಗಳ ಅಂಚುಗಳಲ್ಲಿ ಅಂಡೋತ್ಪತ್ತಿ ಜೀವಕಣಗಳು ಇದ್ದು ಅವು ಮುಂದೆ ಬೀಜವಾಗಿ ಬೆಳೆದು ಹರಡುವಂತಿದ್ದಿರಬಹುದು. ಮುಂದೆ ಅವು ವಿಕಾಸಹೊಂದಿ ಎಲೆಯ ಅಂಚು ಒಳಮಡಚಿ, ಎರಡು ಅಂಚೂ ಕೂಡಿ ಅಂಡಾಶಯವಾಗಿರಬೇಕು, ಎಲೆಗಳ ಮಧ್ಯನಾಳ ಮೇಲಕ್ಕೆ ಮುಂದುವರಿದು ಬೆಳೆದು ಶಲಾಕಾಗ್ರವಾಗಿದೆ. ಅದರ ತುದಿ ಪರಾಗ ಹೊಂದಲು ಅನುಕೂಲವಾಗುವಂತೆ ಅಗಲವಾಗಿ ಅಥವಾ ಸೀಳಿದಂತೆ ವಿವಿಧಾಕಾರ ಹೊಂದಿದೆ. ಯಾವಾಗಲೂ ಅಂಡಗಳು ಈ ಜೋಡಣೆಯಾದ ಅಂಚುಗಳ (ಎಂದರೆ ಅಂಡಾಶಯದ) ಭಾಗದಿಂದಲೇ ಉತ್ಪತ್ತಿಯಾಗುತ್ತವೆ. ಪ್ರತಿಯೊಂದು ಅಂಡಾಶಯದಲ್ಲಿಯೂ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಅಂಡಗಳಿವೆ. ಪ್ರತಿ ಅಂಡದಲ್ಲಿಯೂ ಒಂದು ತತ್ತಿ ಉತ್ಪನ್ನವಾಗಿ ಗರ್ಭಧಾರಣೆಗೆ ಸಿದ್ಧವಾಗುತ್ತದೆ. ಆವೃತಬೀಜ ಸಸ್ಯಗಳಲ್ಲಿ ಪರಾಗಸ್ಪರ್ಶ ಗಾಳಿ, ನೀರು, ಭೂಮ್ಯಾಕರ್ಷಣೆ, ಕೀಟ ಅಥವಾ ಪ್ರಾಣಿಗಳಿಂದಾಗುತ್ತದೆ. ಇತರ ಸಸ್ಯಸಮೂಹದಂತೆ ಇದರಲ್ಲಿ ಸ್ವಯಂಚಲಿತ ಸಂಯೋಗಿ ಜೀವಕಣಗಳು ಉತ್ಪನ್ನವಾಗುವುದಿಲ್ಲ. ಪರಾಗ ಶಲಾಕಾಗ್ರಕ್ಕೆ ಸ್ಪರ್ಶವಾದ ಅನಂತರ ಅದು ಶಲಾಕೆಯ ಮುಖೇನ ಅಂಡಾಶಯವನ್ನು ಹೊಕ್ಕು ತತ್ತಿಯೊಡನೆ ಸಂಯೋಗವಾಗುತ್ತದೆ. ಇದಕ್ಕೆ ಗರ್ಭಕಟ್ಟುವಿಕೆ ಎಂದು ಹೆಸರು. ಗರ್ಭಧಾರಣೆಯಾದ ತತ್ತಿ ಭ್ರೂಣವಾಗುತ್ತದೆ. ಅಂಡ ಮುಂದೆ ಬೆಳೆದು ಬೀಜವಾಗುತ್ತದೆ. ಅಂಡಾಶಯ ಅದನ್ನು ಆವರಿಸಿ ಬೆಳೆದು ಹಣ್ಣಾಗುತ್ತದೆ. ಈ ಕಾರಣದಿಂದ ಈ ಪಂಗಡಕ್ಕೆ ಆವೃತಬೀಜ ಸಸ್ಯಗಳೆಂಬ ಹೆಸರು ಬಂದಿದೆ. 

	ಸಾಮಾನ್ಯವಾಗಿ ಬೀಜಗಳಲ್ಲಿ ಮೂರು ಮುಖ್ಯ ಭಾಗಗಳಿವೆ : 1. ಸಿಪ್ಪೆ-ಒಳ ಭಾಗಗಳನ್ನು ರಕ್ಷಿಸುವುದು ಇದರ ಮುಖ್ಯ ಕಾರ್ಯ. ಹೊರಗಿನ ಸಿಪ್ಪೆ ಮಂದವಾಗಿದ್ದು ಒಳಗಿನ ಸಿಪ್ಪೆ ತೆಳುವಾಗಿರುತ್ತದೆ. 2. ಭ್ರೂಣ-ಇದರಲ್ಲಿ ಎರಡು ಭಾಗಗಳಿವೆ. ಸಲಾಕೆಯ ಆಕಾರದಲ್ಲಿದ್ದು ಕೆಳಕ್ಕೆ ಬಾಗಿರುವ ಪ್ರಥಮ ಮೂಲ ಒಂದು ; ಇದರಿಂದ ಬೇರು ಉತ್ಪನ್ನವಾಗುತ್ತದೆ ; ಮುಂದೆ ಸಸ್ಯಕಾಂಡವಾಗುವ ಬಿಳುಪಿನ ಎರಡು ಎಲೆಗಳುಳ್ಳ ಪ್ರಥಮ ಕಾಂಡ. 3. ಭ್ರೂಣಾಹಾರ-ಇದು ಎಲ್ಲ ಬೀಜಗಳಲ್ಲೂ ಇರುವುದಿಲ್ಲ. ಏಕದಳ ಸಸ್ಯಗಳಲ್ಲಿ ಮತ್ತು ಹರಳು ಮುಂತಾದ ದ್ವಿದಳ ಸಸ್ಯಗಳಲ್ಲಿ ಹೆಚ್ಚು. ಹೆಚ್ಚು ಇರುವಲ್ಲಿ ಭ್ರೂಣ ಸಣ್ಣದು. ಇಲ್ಲದಿರುವಲ್ಲಿ ಅಂಕುರ ದಳಗಳೂ ಭ್ರೂಣವೂ ದೃಢವಾಗಿ ಬೆಳೆದಿರುತ್ತವೆ. ಉದಾಹರಣೆಗೆ, ತಿಂಗಳ ಹುರುಳಿ, ಅವರೆ ಇತ್ಯಾದಿ. ಬೀಜಗಳನ್ನು ಆವರಿಸಿರುವ ಅಂಡಾಶಯ ಹಣ್ಣು. ಇವುಗಳಲ್ಲಿ ವೈವಿಧ್ಯವಿದ್ದರೂ ಒಂದೇ ಪ್ರಭೇದದವು ಅಥವಾ ಜಾತಿಯವು ನಿರ್ದಿಷ್ಟ ನಿಯಮವನ್ನನುಸರಿಸುತ್ತವೆ. ಪ್ರಾಣಿಗಳ ಆಹಾರವನ್ನು ಈ ಹಣ್ಣುಗಳೂ ಬೀಜಗಳೂ ಹೊಂದಿರುವುದು ಈ ಸಸ್ಯ ಸಮೂಹದ ಅಭಿವೃದ್ಧಿಗೆ ಮೂಲಕಾರಣ. 

	17ನೆಯ ಶತಮಾನದ ಉತ್ತರಾರ್ಧದಲ್ಲಿ ಜಾನ್ ರೇ ಈ ಸಸ್ಯಗಳನ್ನು ಅಂಗಾಂಶಗಳ ವ್ಯತ್ಯಾಸಗಳ ಆಧಾರದ ಮೇಲೆ ದ್ವಿದಳ ಮತ್ತು ಏಕದಳ ಸಸ್ಯಗಳೆಂಬ ಎರಡು ಪಂಗಡಗಳಾಗಿ ಬೇರ್ಪಡಿಸಿದ. ದ್ವಿದಳ ಸಸ್ಯಗಳಲ್ಲಿ ಭ್ರೂಣಕ್ಕೆ ಎರಡು ಅಂಕುರದಳ ಇವೆ. ಕಾಂಡಗಳ ಪುನರ್ ಬೆಳೆವಣಿಗೆಗೆ ನಿರ್ದಿಷ್ಟವಾದ ನಾಳಸಮೂಹದ ಜೀವಕಣ ಉತ್ಪತ್ತಿಭಾಗದಿಂದಾಗುತ್ತದೆ. ಎಲೆಗಳ ನಾಳಗಳು ಜಾಲದಾಕಾರದಲ್ಲಿ ಹರಡಿವೆ. ಎಲೆಗಳು ಕಾಂಡ ಹೊಂದಿ ಅಂಚು ನಯವಾಗಿ ಅಥವಾ ಕಚ್ಚು ಹೊಂದಿರುತ್ತವೆ. ಹೂವಿಗೆ ದಳವಲಯವಿದ್ದು ಅವು 4-5 ಅಥವಾ 4, 5ರ ಅಪವತ್ರ್ಯ ಸಂಖ್ಯೆಯಲ್ಲಿರುತ್ತವೆ. ಪರಾಗಗಳ ಹೊರಭಿತ್ತಿಯಲ್ಲಿ ಸಾಮಾನ್ಯವಾಗಿ ಮಡಿಕೆ ಅಥವಾ ನೀಳ ವಿಭಾಗಗಳಿರುತ್ತವೆ. ಏಕದಳ ಬೀಜಗಳಲ್ಲಿ ಭ್ರೂಣ ಒಂದೇ ಅಂಕುರದಳ ಹೊಂದಿದೆ. ಕಾಂಡಕ್ಕೆ ದಪ್ಪವಾಗಲು ನೆರವಾಗುವ ಎರಡನೆಯ ಬೆಳೆವಣಿಗೆ (ಸೆಕೆಂಡರಿ ಗ್ರೋತ್) ಸಾಧ್ಯವಿಲ್ಲ. ಎಲೆಗಳಿಗೆ ಅಂಚುನೇರವಾಗಿದ್ದು ಕಾಂಡವಿಲ್ಲದೆ ನಾಳಗಳು ಸಮಾನಾಂತರವಾಗಿವೆ. ಪುಷ್ಪವಲಯಗಳ ಸಂಖ್ಯೆ ಮೂರರ ಅಪವತ್ರ್ಯ. ಪರಾಗಗಳ ಹೊರಭಿತ್ತಿಯಲ್ಲಿ ಒಂದೇ ಮಡಿಕೆ ಇದೆ. ದ್ವಿದಳ ಸಸ್ಯಗಳಲ್ಲಿ ಸುಮಾರು 260-270 ಕುಟುಂಬಗಳೂ, 9,500 ಜಾತಿಗಳೂ, 2,00,000ಕ್ಕೂ ಮೀರಿದ ಪ್ರಭೇದಗಳೂ ಇವೆ. ಏಕದಳ ಬೀಜ ಪಂಗಡದಲ್ಲಿ 65-70 ಕುಟುಂಬಗಳು ಮಾತ್ರವಿದ್ದು 3,000 ಜಾತಿಗಳನ್ನೂ 50,000 ಪ್ರಭೇದಗಳನ್ನೂ ಒಳಗೊಂಡಿವೆ. 

	ಆವೃತಬೀಜ ಸಸ್ಯಗಳ ವರ್ಗೀಕರಣ : ಸಸ್ಯಗಳ ಬಾಹ್ಯರಚನಾಶಾಸ್ತ್ರದ ಅಧ್ಯಯನದಿಂದ ವಿವಿಧ ಗಿಡಗಳಲ್ಲಿ ಅನೇಕ ಹೋಲಿಕೆ ಮತ್ತು ವ್ಯತ್ಯಾಸಗಳು ಗೋಚರವಾಗುತ್ತವೆ. ಈ ವೈವಿಧ್ಯವನ್ನು ಸರಿಯಾಗಿ ಅರಿತು ವಿವರಿಸಿ ಸಸ್ಯಗಳಲ್ಲಿರುವ ಪರಸ್ಪರ ಹೋಲಿಕೆ ಮತ್ತು ವ್ಯತ್ಯಾಸಗಳಿಗೆ ಅನುಗುಣವಾಗಿ ಸಸ್ಯಜಾತಿ ಕುಟುಂಬಗಳನ್ನು ಜೋಡಿಸುವುದೇ ಇದರ ಉದ್ದೇಶ. ಕೆಳಮಟ್ಟದ ಸಸ್ಯರಚನೆಯಿಂದ ಕ್ರಮೇಣ ಹೇಗೆ ಅವು ಅಂಗ ಅಂಗವಾಗಿ ವಿಕಾಸಹೊಂದಿ ಉನ್ನತಮಟ್ಟವನ್ನು ಮುಟ್ಟಿದುವೆಂದು ಈ ಅಧ್ಯಯನದಿಂದ ತಿಳಿಯಬಹುದು. ಇಂಥ ವರ್ಗೀಕರಣಕ್ಕೆ ಬಾಹ್ಯರಚನೆ, ಅಂಗರಚನೆ, ಜೀವನಚರಿತ್ರೆ, ಗಾತ್ರ, ಆಕಾರ, ಹೂಗಳ ಬಣ್ಣ ಅವುಗಳ ಉಪಯೋಗ ಅಥವಾ ಅವುಗಳ ನೈಸರ್ಗಿಕ ವಿವರಣೆ-ಇವೆಲ್ಲ ಆಧಾರಗಳು. ಆದರೆ ಅವು ಸ್ಥಿರವಾದವುಗಳಲ್ಲ. ಗಾಳಿ, ಬೆಳಕು, ನೀರು, ಮಣ್ಣು ಮುಂತಾದುವುಗಳು ಸಸ್ಯಸಮೂಹದಲ್ಲಿ ಹೊಂದಾಣಿಕೆಯ ರೂಪವನ್ನು ಉಂಟುಮಾಡಬಲ್ಲವು. ಅವು ಬೇರೆ ಬೇರೆ ಜಾತಿಯವಾದರೂ ಎಲ್ಲಕ್ಕೂ ಒಂದೇ ವಿಧವಾದ ಬಾಹ್ಯರೂಪ ರಚನೆ ಉಂಟಾಗಬಹುದು. ಆದರೆ ಸಸ್ಯಗಳ ಸಂತಾನಾಭಿವೃದ್ಧಿ ಭಾಗಗಳಲ್ಲಿ ಮಾತ್ರ ಬಾಹ್ಯಾವರಣದಿಂದ ಅತಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಅವುಗಳ ವಿವಿಧ ವಲಯಗಳ ಸಂಖ್ಯೆ ಜೋಡಣೆಯ ಕ್ರಮ ಮುಂತಾದವು ಸಾಮಾನ್ಯವಾಗಿ ಪ್ರತಿಜಾತಿಯಲ್ಲೂ ಸಮನಾಗಿರುತ್ತದೆ. ಅವುಗಳ ಸಣ್ಣ ವ್ಯತ್ಯಾಸಗಳ ಆಧಾರದ ಮೇಲೆ ವಿವಿಧ ಪ್ರಭೇದಗಳನ್ನು ಕಲ್ಪಿಸಿರುವರು. ಬಾಹ್ಯರಚನೆಯಲ್ಲೂ ಸಂತಾನಾಭಿವೃದ್ಧಿ ಭಾಗಗಳಲ್ಲೂ ಹೋಲುವ ಸಸ್ಯಗಳನ್ನು ಜೋಡಿಸಿ ಅವನ್ನು ಒಂದು ಪ್ರಭೇದವೆಂದೂ ಹೆಚ್ಚು ಅಂಶಗಳಲ್ಲಿ ಸಾದೃಶ್ಯ ಹೊಂದಿ ಸ್ವಲ್ಪ ಮಾತ್ರ ಭೇದವುಳ್ಳ ಅನೇಕ ಪ್ರಭೇದಗಳ ವಿವರಣೆಯಾಗಿ ಅವನ್ನು ಬೇರ್ಪಡಿಸಲೂ ಸುಲಭವಾಗಿ ಅರಿಯಲೂ ಸಹಾಯವಾಗುತ್ತದೆ. ಇದನ್ನು ಸಸ್ಯಶಾಸ್ತ್ರ ಪಿತಾಮಹನೆನಿಸಿರುವ ಸ್ವೀಡನ್ನಿನ ಅನಾಯಸ್ (1707-1778) ಮೊದಲಬಾರಿಗೆ ದ್ವಿಪದ ನಾಮಕರಣ ಎಂದು ವಿವರಿಸಿದ. ಅದು ಅತ್ಯಂತ ಸಮಂಜಸವಾದ್ದರಿಂದ ಅದೇ ನೀತಿಯನ್ನು ಈಗಲೂ ಅನುಸರಿಸಲಾಗುತ್ತಿದೆ. ಹೀಗೆ ವರ್ಗೀಕರಣ ಮಾಡಿ ವಿವರಿಸುವುದರಿಂದ ಸಸ್ಯವನ್ನು ಗುರುತಿಸುವುದೂ ತಿಳಿಯುವುದೂ ಸುಲಭವಾಗುತ್ತದೆ. ಉದಾಹರಣೆಗೆ ಅರಳಿ, ಆಲ, ಅತ್ತಿ ಎಲ್ಲವೂ ಒಂದೇ ಜಾತಿ (ಫೈಕಸ್) ; ಅವುಗಳಲ್ಲಿನ ವ್ಯತ್ಯಾಸ ತೋರಿಸಲು ಫೈಕಸ್ ಬೆಂಗಾಲೆನ್ನಸ್, ಫೈಕಸ್ ರಿಲಿಜಿಯೋಸಾ, ಫೈಕಸ್ ಎರಿಕಾ ಎಂಬ ಅನುಕ್ರಮ ಪ್ರಭೇದನಾಮಗಳನ್ನು ವಿವರಿಸಲಾಗುತ್ತದೆ. ಪ್ರಾಚೀನ ಗ್ರೀಸಿನ ಥಿಯೊಫ್ರಾಸ್‍ಟಸ್ ಮುಂತಾದವರು ಹಲವು ಮೂಲಿಕೆಗಳನ್ನು ವಿವರಿಸಲು ಮೊದಲು ಬಾಹ್ಯಶರೀರ ರಚನೆಯ ಆಧಾರದ ಹಲವು ಜಾತಿಗಳನ್ನು ವಿವರಿಸಿದರು. 18ನೆಯ ಶತಮಾನದವರೆಗಿನ ಅವಧಿಯಲ್ಲಿ ಅನೇಕ ನುರಿತ ಸಸ್ಯಶಾಸ್ತ್ರಜ್ಞರು ಅದನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರು. ಅನಾಯಸ್ 1735ರಲ್ಲಿ ಬಾಹ್ಯರಚನೆಯ ಆಧಾರದಿಂದಲೇ ಪ್ರಭೇದಗಳನ್ನು ಸೂಚಿಸಿ ದ್ವಿಪದ ನಾಮಕರಣವನ್ನು ಅನುಸರಿಸಿ ಶಾಸ್ತ್ರೀಯ ವರ್ಗೀಕರಣಶಾಸ್ತ್ರದ ಅಧ್ಯಾಯ ಆರಂಭಿಸಿದ. ಆತ ಅದನ್ನು ಇನ್ನೂ ಉತ್ತಮಪಡಿಸಬೇಕೆಂದು ನೈಸರ್ಗಿಕ ರೀತಿಯ ವರ್ಗೀಕರಣಮಾಡಲು ಪ್ರಯತ್ನಿಸುತ್ತಿದ್ದಾಗಲೇ ಮರಣಹೊಂದಿದ. ಈ ನಿಯಮಗಳನ್ನು ಸರಿಪಡಿಸಿ ವಿವರಿಸಿದ ಕೀರ್ತಿ ಫ್ರಾನ್ಸಿನ ವಿಜ್ಞಾನಿ ಜಸ್ಯೂಗೆ (1789) ಸಲ್ಲುತ್ತದೆ. ಸಸ್ಯಜೀವನ ವಿಕಾಸದ ಅಧ್ಯಯನದಿಂದ ಕಾಲಾಂತರದಲ್ಲಿ ಹೂವಿನ ವಿವಿಧ ವಲಯಗಳು ಅಧಿಕ ಸಂಖ್ಯೆಯಿಂದ ಸರಳ ಸಂಖ್ಯೆಗೆ ಇಳಿಯಿತೆಂದು ಅನೇಕ ಆಧಾರಗಳಿಂದ ತಿಳಿದುಬರುತ್ತದೆ. ಇದರಿಂದ ಈಗಿನ ಸರಳ ಪುಷ್ಪಗಳು ಹೆಚ್ಚು ಭಾಗಗಳಿರುವ ಪುಷ್ಪಗಳಿಗಿಂತ ಮುಂದುವರಿದವೆಂದು ತಿಳಿಯುತ್ತದೆ. ಈ ತತ್ತ್ವದ ಅನುಸರಣೆ ಅಥವಾ ನಿರಾಕರಣೆಯ ಆಧಾರ ಮುಂದಿನ ಸಸ್ಯಶಾಸ್ತ್ರಜ್ಞರನ್ನು ಎರಡು ಪಂಗಡಗಳಾಗಿಸಿತು. ಇವುಗಳಲ್ಲಿ ಜರ್ಮನಿಯ ಎಂಗ್ಲರ್ ಮತ್ತು ಪ್ರಾಂಟೆಲ್ ಎಂಬುವರು ಈ ತತ್ತ್ವವನ್ನು ನಿರಾಕರಿಸಿ, ಗಾಳಿಯಿಂದ ಪರಾಗ ಸ್ಪರ್ಶವಾಗುವ ಸಸ್ಯಗಳು, ಕೀಟಗಳಿಂದಾಗುವ ಸಸ್ಯಗಳಿಗಿಂತ ಪುರಾತನವಾದುವೆಂದೂ ಮೃದು ಕಾಂಡವದು ಗಟ್ಟಿಯಾದ ಮರದವುಗಳಿಗಿಂತ ಹಿಂದಿನವೆಂದೂ ಜಲಸಸ್ಯಗಳಿಂದ ಭೂಸಸ್ಯಗಳ ಉತ್ಪನ್ನವಾಗಿದೆಯೆಂದೂ ಏಕದಳ ಸಸ್ಯಗಳು ದ್ವಿದಳ ಸಸ್ಯಗಳಿಗಿಂತ ಪೂರ್ವದವೆಂದೂ ನಿರ್ಧರಿಸಿ ಪ್ರಪಂಚದ ಎಲ್ಲ ಸಸ್ಯಗಳನ್ನೂ ಪೂರ್ಣವಾಗಿ 20 ಸಂಪುಟಗಳಲ್ಲಿ ವಿವರಿಸಿ ಪ್ರಕಟಿಸಿದರು. ಇಷ್ಟು ಬೃಹದ್ಯೋಜನೆಯ ವಿವರಣೆಯನ್ನು ಮೀರಿಸಲು ಇದುವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಎಲ್ಲ ಸರಳ ಹೂಗಳೂ ಹಿಂದಿದ್ದ ಹೆಚ್ಚು ಭಾಗ ಹೊಂದಿದವುಗಳಿಂದ ವಿಕಾಸ ಹೊಂದಿ ಉತ್ಪನ್ನವಾದುವು ಎಂದು ಜಸ್ಯೊ ಸೂಚಿಸಿದ್ದ ಊಹೆಯನ್ನು ಕ್ರಮೇಣ ಡಿ ಕಂಡೋಲ್ (1813), ಅಂಡ್ಲೇ (1830), ಬೆಂತಾಮ್ ಮತ್ತು ಹುಕ್ಕರ್ (1862-83), ಜೆಸ್ಸಿ (1915) ಮತ್ತು ಹಚ್ಚಿನ್ ಸನ್ (1948) ಅನುಮೋದಿಸಿ ಅದನ್ನೇ ಅವರ ವಿವರಣೆಯಲ್ಲಿ ಅನುಸರಿಸಿದ್ದಾರೆ. ಅವರು ಯಾವುದೇ ಪ್ರಭೇದ ಅಥವಾ ಜಾತಿಯಲ್ಲಿ ಗಟ್ಟಿಯಾದ ಮರದಂಥ ಅಂಗಾಂಶವೇ ಮೆದುಕಾಂಡ ಅಂಗಾಂಶಗಳಿಗೆ ಮೂಲವೆಂದೂ ಜಲಸಸ್ಯಗಳು ಭೂಸಸ್ಯ ಜಾತಿಗಳಿಂದ ಉತ್ಪನ್ನವಾದದೆಂದೂ ದ್ವಿದಳ ಸಸ್ಯಗಳಿಂದ ಏಕದಳಸಸ್ಯ ಪಂಗಡವಾಯಿತೆಂದೂ ಪುಷ್ಪಪತ್ರರಹಿತ ಮತ್ತು ದಳವಲಯ ರಹಿತ ಹೂಗಳು ಅವುಗಳಿದ್ದ ಪೂರ್ವಿಕರಿಂದಲೇ ಬಂದವೆಂದೂ ಪ್ರತಿಪಾದಿಸಿದ್ದಾರೆ. ಯಾವುದೊಂದು ವರ್ಗೀಕರಣ ವಿವರಣೆಯನ್ನೂ ಪೂರ್ಣ ಸಮರ್ಪಕವೆಂದು ಹೇಳಲಾಗುವುದಿಲ್ಲ. ಆದರೆ ಏಕದಳ ಸಸ್ಯಗಳು ದ್ವಿದಳ ಸಸ್ಯಗಳಿಂದ ಉತ್ಪನ್ನವಾದವೆಂದೂ ಅಥವಾ ಯಾವುದೋ ಅಳಿದ ಪೂರ್ವಿಕರಿಂದ ಈ ಎರಡೂ ಬೇರೆ ಬೇರೆಯಾಗಿ ವಿಕಾಸಹೊಂದಿ ಬೆಳೆದಿರಬಹುದೆಂದೂ ಅನೇಕ ಪುರಾವೆಗಳಿಂದ ಊಹಿಸಲಾಗಿದೆ. ಎಂಗ್ಲರ್ ಮತ್ತು ಪ್ರಾಂಟೆಲ್‍ರು ಏಕದಳ ಬೀಜ ಸಸ್ಯಗಳನ್ನು 11 ಶ್ರೇಣಿ, 46 ಕುಟುಂಬಗಳಾಗಿಯೂ ಮತ್ತು ದ್ವಿದಳ ಬೀಜ ಸಸ್ಯಗಳನ್ನು 44 ಶ್ರೇಣಿ, 261 ಕುಟುಂಬಗಳಾಗಿಯೂ ವಿಂಗಡಿಸಿ ವಿವರಿಸಿದ್ದಾರೆ. ಬೆಂತಾಮ್ ಮತ್ತು ಹುಕ್ಕರ್ ರೀತ್ಯಾ ಏಕದಳ ಸಸ್ಯಗಳನ್ನು 34 ಕುಟುಂಬಗಳಾಗಿಯೂ ದ್ವಿದಳ ಸಸ್ಯಗಳನ್ನು 174 ಕುಟುಂಬಗಳಾಗಿಯೂ ವಿಂಗಡಿಸಿದೆ. ಹಿಂದಿನ ಬ್ರಿಟಿಷ್ ಚಕ್ರಾಧಿಪತ್ಯದ ಭಾಗಗಳಲ್ಲೊ ಹಲವು ಯೂರೋಪಿನ ರಾಷ್ಟ್ರಗಳಲ್ಲೂ ಬೆಂತಾಮ್ ಮತ್ತು ಹುಕ್ಕರ್‍ರವರ ವರ್ಗೀಕರಣವನ್ನೇ ಬಳಸಲಾಗುತ್ತಿದೆ. 					
(ಜಿ.ವಿ.ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ